ಪಾಂಪೆಡೂರ್, ಷಾನ್ ಆಂಟ್ವಾನೆಟ್ ಪ್ವ್ಯಾಸನ್
1721-1764. ಫ್ರಾನ್ಸಿನ 15ನೆಯ ಲೂಯಿ ದೊರೆಯ ಉಪಪತ್ನಿಗಳಲೊಬ್ಬಳು. ಅವನ ಉಪಪತ್ನಿಯರೆಂದು ಗೊತ್ತಿರುವವರ ಪೈಕಿ ನಾಲ್ಕನೆಯವಳು ಹಾಗೂ ಅತ್ಯಂತ ಪ್ರಸಿದ್ಧಳು. ಈಕೆ 1721ರ ಡಿಸೆಂಬರ್ 29ರಂದು ಪ್ಯಾರಿಸಿನ ಕೆಳಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದಳು. ಇವಳ ತಂದೆಯ ದುರಾದೃಷ್ಟವೇ ಈಕೆಯ ಪಾಲಿಗೆ ಒಳ್ಳೆಯ ಅದೃಷ್ಟವಾಗಿ ಪರಿಣಮಿಸಿತು. ತಂದೆ ಫ್ರಾನ್ಸ್ ವಾ ಪ್ವ್ಯಾಸನ್ ಉದ್ಯೋಗದಲ್ಲಿದ್ದ ಸಂಸ್ಥೆಯ ಪಾಲುದಾರರು 1725ರಲ್ಲಿ ಉದ್ಯಮದಲ್ಲಿ ನಷ್ಟ ಅನುಭವಿಸಿ ತಾತ್ಕಾಲಿಕವಾಗಿ ದಿವಾಳಿಯೇಳುವ ಸ್ಥಿತಿಯಲ್ಲಿದ್ದಾಗ ಈತ ಪರದೇಶಕ್ಕೆ ಓಡಿಹೋದ. ಎಂಟು ವರ್ಷಗಳ ಕಾಲ ಅಲ್ಲೇ ಇದ್ದ. ಪಾಂಪೆಡೂರಳ ತಾಯಿಯ ಮೇಲೆ ಸಂಸಾರ ನಿರ್ವಹಣೆಯ ಭಾರ ಬಿತ್ತು. ಆಕೆ ಶ್ರೀಮಂತನೊಬ್ಬನ ರಕ್ಷಣೆ ಪಡೆದಳು. ಆತ ಪಾಂಪೆಡೂರಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ ಮತ್ತು ತನ್ನ ಭ್ರಾತ್ರೀಯ ಸಿ.ಜಿ.ನಾರ್‍ಮಾಂಟ್ ಡಿ ಇಟಿಯೊಲ್ಸ್ ನೊಂದಿಗೆ ಆಕೆಯ ಮದುವೆ ಮಾಡಿಸಿದ. ಈ ವೇಳೆಗೆ ಪಾಂಪೆಡೂರ್ ಸೌಂದರ್ಯವತಿಯಾಗಿ ವಿಕಸಿಸುತ್ತಿದ್ದಳು. ಬೌದ್ಧಿಕ ವಿಚಾರಗಳಲ್ಲಿ ಇವಳ ಆಸಕ್ತಿ, ಅತಿಥೇಯಳಾಗಿ ಎಲ್ಲರನ್ನೂ ಆಕರ್ಷಿಸುವ ಬೆಡಗು, ಗಾಂಭೀರ್ಯ, ಸಂಗೀತ ಅಭಿನಯಗಳಲ್ಲಿ ಈಕೆಯ ಸಾಮಥ್ರ್ಯ, ಉಡುಗೆತೊಡುಗೆಗಳಲ್ಲಿ ಅತ್ಯಾಧುನಿಕವೆನಿಸುವ ಶೈಲಿ ಇವೆಲ್ಲವೂ ಪ್ಯಾರಿಸಿನಲ್ಲಿ ಅನೇಕರ ಗಮನ ಸೆಳೆದುವು. ವಾಲ್ಟೇರ್, ಮಾಂಟೆಸ್ಕೊ, ಫಾಂಟ್‍ನೆಲ್, ಕ್ರೇಬೀಯಾನ್ ಮುಂತಾದ ಆಗಿನ ಕಾಲದ ಪ್ರಮುಖ ಲೇಖಕರನೇಕರನ್ನು ಈಕೆ ಔತಣಗಳಲ್ಲಿ ಸತ್ಕರಿಸಿದಳು.

1754ರಲ್ಲಿ ಈಕೆ ಲೂಯಿಯ ಕಣ್ಣಿಗೆ ಬಿದ್ದಳು. ಆತ ಇವಳನ್ನು ಮಾರ್ಕೀಸ್ ಪದವಿಗೆ ಏರಿಸಿದ. ವರ್ಸೇಲ್ಸಿನಲ್ಲಿ ಮಹಾರಾಣಿಗೆ ಸಾದರಪಡಿಸಿದ. ಹೀಗೆ ಈಕೆ ದೊರೆಯ ಉಪಪತ್ನಿಯೆಂದು ಮನ್ನಣೆ ಪಡೆದಳು.
ದೊರೆಯ ಹಿರಿಯ ಮಗನೂ ಶ್ರೀಮಂತ ಆಸ್ಥಾನಿಕರೂ ಜೆಸ್ಯೂಟರೂ ಪಾಂಪೆಡೂರಳ ಬಗ್ಗೆ ಆಸಹನೆಯ ನಿಲವು ತಳೆದಿದ್ದರೂ ಈಕೆ ಬಲುಬೇಗ ಲೂಯಿದೊರೆಯ ಮೇಲೆ ಪ್ರಭಾವ ಬೀರತೊಡಗಿದಳು. ರಾಜ್ಯ ವ್ಯವಹಾರಗಳಿಂದ ಅವನ ಮನಸ್ಸನ್ನು ತನ್ನತ್ತ ತಿರುಗಿಸಿಕೊಂಡಳು. ಅವನಂತೆಯೇ ಈಕೆಗೂ ಕಟ್ಟಡಗಳ ನಿರ್ಮಾಣದಲ್ಲಿ, ಉದ್ಯಾನಗಳಲ್ಲಿ ಅತೀವ ಹುಚ್ಚು. ಈಕೆ ಆಸ್ಥಾನದಲ್ಲಿ ಹವ್ಯಾಸಿ ನಾಟಕ ಪ್ರದರ್ಶನಗಳನ್ನು ಏರ್ಪಡಿಸಿದಳು. ಕಲೆ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದಳು. ವಾಲ್ಟೇರನನ್ನು ಆಸ್ಥಾನದ ಇತಿಹಾಸ ಲೇಖಕನನ್ನಾಗಿ, ಅರ್ಥಶಾಸ್ತ್ರದ ಪ್ರಕೃತಿವಾದಿ ಪಂಥದ ಸ್ಥಾಪಕನಾದ ಕೆನೇಯನ್ನು ತನ್ನ ವೈದ್ಯನಾಗಿ ನೇಮಿಸಿಕೊಂಡಳು. ವಿಶ್ವಕೋಶದ ಸಂಪಾದಕರಿಗೆ ರಕ್ಷಣೆ ಪ್ರೋತ್ಸಾಹ ನೀಡಿದಳು. ಇವಳ ರಾಜಕೀಯ ಪ್ರಭಾವವನ್ನು ವಿಶೇಷವಾಗಿ ಉತ್ಪ್ರೇಕ್ಷೆ ಮಾಡಲಾಗಿದೆ. ಈಕೆಯ ಪ್ರಭಾವ ಸಾಮಾನ್ಯವಾಗಿ ಆಂತರಿಕ ವ್ಯವಹಾರಗಳಿಗೆ ಸೀಮಿತವಾಗಿತ್ತು. ಈಕೆ ಅರಮನೆಗಳ ಹಾಗೂ ತನ್ನ ಭವನಗಳ ಅಲಂಕರಣದಲ್ಲಿ ವಿಶೇಷ ಆಸಕ್ತಿ ತೋರಿಸಿದಳು. ರಾಜನೊಂದಿಗೆ ಇವಳ ದೈಹಿಕ ಸಂಬಂಧ 1751ರಲ್ಲಿ ಕೊನೆಗೊಂಡಿತಾದರೂ ಈಕೆ ತನ್ನ ಕೊನೆಗಾಲದ ವರೆಗೂ (1764) ಅವನ ಆಪ್ತೆಯೂ ಸಲಹೆಗಾರಳೂ ಆಗಿ ಮುಂದುವರಿದಿದ್ದಳು. ಪಾಂಪೆಡೂರ್ ತನ್ನ ಬಾಳಿನ ಕೊನೆಯ ವರ್ಷಗಳಲ್ಲಿ ಧಾರ್ಮಿಕ ಶ್ರದ್ಧೆ ಹಾಗೂ ದೈವಭಕ್ತಿ ಬೆಳೆಸಿಕೊಂಡಿದ್ದಳು. 1756ರಲ್ಲಿ ಈಕೆ ರಾಣಿಯ ಚೇಟಿಯಾಗಿ ನೇಮಕಗೊಂಡ ಮೇಲೆ ಇವಳಿಗೆ ಆಸ್ಥಾನದಲ್ಲಿ ಭದ್ರವಾದ ಸ್ಥಾನಮಾನಗಳು ಪ್ರಾಪ್ತವಾಗಿದ್ದುವು.
(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ